ನಾಕ್ಸ್, ರೋನಾಲ್ಡ ಅರ್ಬತ್‍ನಾಟ್
1888-1957 ಸಾಹಿತಿ ಇ.ವಿ. ನಾಕ್ಸನ ಸೋದರ. ಇಂಗ್ಲೆಂಡಿನಲ್ಲಿ ಬರೆಹಗಾರನಾಗಿ ಹಾಗೂ ಚರ್ಚಿನ ಅಧಿಕಾರಿಯಾಗಿ ಪ್ರಸಿದ್ಧನಾದವ. ತಂದೆ ರೆವರೆಂಡ್ ಇ.ಎ. ನಾಕ್ಸ್ 1903ರಿಂದ 1921ರವರೆಗೆ ಮ್ಯಾಂಚೆಸ್ಟರಿನಲ್ಲಿ ಪ್ರಾಟೆಸ್ಟೆಂಟ್ ಚರ್ಚಿನ ಬಿಷಪ್ ಆಗಿದ್ದ. ಮನೆಯಲ್ಲಿ ಆಧ್ಯಾತ್ಮಿಕ ಹಾಗೂ ಸಾಹಿತ್ಯಕ ವಾತಾವರಣವಿತ್ತು. ಈಟನ್ ಶಾಲೆ ಮತ್ತು ಆಕ್ಸ್‍ಫರ್ಡಿನ ಬಾಲಿಯಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಅತ್ಯಂತ ಪ್ರತಿಭಾಸಂಪನ್ನನೆಂದು ಹೆಸರು ಪಡೆದ. ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಆಕ್ಸ್‍ಫರ್ಡಿನ ಟ್ರಿನಿಟಿ ಕಾಲೇಜಿನ ಫೆಲೋ ಹಾಗೂ ಅಧ್ಯಾಪಕ ಆದ. ಏಳು ವರ್ಷದ ಅನಂತರ ಪ್ರಾಟೆಸ್ಟೆಂಟ್ ಪಂಥ ತ್ಯಜಿಸಿ ರೋಮನ್ ಕ್ಯಾತೊಲಿಕ್ ಚರ್ಚನ್ನು ಸೇರಿ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಧರ್ಮಗುರುವಾಗಿ ಆಯ್ಕೆಯಾದ. 1926ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ರೋಮನ್ ಕ್ಯಾತೊಲಿಕ್ ಚಾಪ್ಲೇನ್ ಆಗಿ ನೇಮಿತನಾದ. 1936ರಲ್ಲಿ ಪೋಪರ ಡೊಮೆಸ್ಟಿಕ್ ಪ್ರೀಲೇಟ್ ಆಗಿಯೂ 1951ರಲ್ಲಿ ಪ್ರೋಟೊನೋಟಂ ಆ್ಯಪಸ್ತೊಲಿಕ್ ಆಗಿಯೂ ಪೋಪ್‍ನಿಂದ ನೇಮಕಗೊಂಡ. ಧಾರ್ಮಿಕ ಹಾಗೂ ಸಾಹಿತ್ಯಿಕ ಕೃತಿಗಳ ರಚನೆಯಲ್ಲಿ ತೊಡಗಿದ ಈತನಿಗೆ ಟ್ರಿನಿಟಿ ಕಾಲೇಜಿನ ಗೌರವ ಫೆಲೋಷಿಪ್ 1941ರಲ್ಲಿ ಬಾಲಿಯಲ್ ಕಾಲೇಜಿನ ಗೌರವ ಫೆಲೋಷಿಪ್ 1951ರಲ್ಲಿ ಮತ್ತು ಇಂಗ್ಲೆಂಡಿನ ರಾಯಲ್ ಸೊಸೈಟಿ ಆಫ್ ಲಿಟರೇಚರ್‍ನ ಫೆಲೋಷಿಪ್ 1950ರಲ್ಲಿ ದೊರಕಿದವು. ಐರ್ಲೆಂಡಿನ ರಾಷ್ಟ್ರೀಯ ವಿಶ್ವವಿದ್ಯಾಲಯ 1954ರಲ್ಲಿ ಈತನಿಗೆ ಗೌರವ ಡಾಕ್ಟರೇಟುಗಳನ್ನು ಸಾಹಿತ್ಯ ಮತ್ತು ಧರ್ಮಶಾಸ್ತ್ರ ಎರಡರಲ್ಲಿಯೂ ನೀಡಿತು.

	1939ರಲ್ಲಿ ಈತ ಬೈಬಲ್ಲಿನ ಹೊಸ ಅನುವಾದ ಪ್ರಾರಂಭಿಸಿದ. ಹೊಸ ಒಡಂಬಡಿಕೆ 1945ರಲ್ಲಿ ಹಳೆಯ ಒಡಂಬಡಿಕೆ 1949ರಲ್ಲಿ ಪ್ರಕಟವಾದವು. 1918ರಲ್ಲಿಯೇ ಎ ಸ್ಪಿರಿಚ್ಯುಅಲ್ ಇನೀಯಿಡ್ (ಆಧ್ಯಾತ್ಮಿಕ ಮಹಾಪ್ರಯಾಣ) ಪ್ರಕಟಿಸಿದ ಈತ 1927ರಲ್ಲಿ ದಿ ಬಿಲೀಫ್ ಆಫ್ ದಿ ಕ್ಯಾತೊಲಿಕ್ಸ್ (ಕ್ಯಾತೊಲಿಕರ ನಂಬಿಕೆ), 1935ರಲ್ಲಿ ಬಾರ್ಚೆಸ್ಟರ್ ಪಿಲ್ಗ್ರಿಮೇಜ್ (ಬಾರ್ಚೆಸ್ಟರ್ ಯಾತ್ರೆ), 1945ರಲ್ಲಿ ಗಾಡ್ ಅಂಡ್ ದಿ ಆಟಮ್ (ದೇವರು ಮತ್ತು ಅಣು) ಗ್ರಂಥಗಳನ್ನು ಧರ್ಮದ ಆಧಾರವಿಟ್ಟುಕೊಂಡು ರಚಿಸಿದ. 1950ರಲ್ಲಿ ಧರ್ಮದ ಇತಿಹಾಸದ ಒಂದು ಅಧ್ಯಾಯ-ಉತ್ಸಾಹ ಎಂಬ ಗ್ರಂಥ ಪ್ರಕಟವಾಯಿತು. ಈ ಧಾರ್ಮಿಕ ಗ್ರಂಥಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ವಾದವಿವಾದಗಳನ್ನು ಎಬ್ಬಿಸಿ ಕಟುಟೀಕೆಗೆ ಒಳಗಾಗಿವೆ. ವಿವಾದಗಳನ್ನು ಪ್ರಚೋದಿಸುವುದೇ ಈತನ ಸಾಹಿತ್ಯಿಕ ಗುರಿಯೂ ಆಗಿತ್ತೆನ್ನಬಹುದು. ಬ್ರಾಡ್‍ಕಾಸ್ಟ್ ಮೈಂಡ್ಸ್ (1932, ಪ್ರಸಾರದ ಬುದ್ಧಿಗಳು) ಎಂಬ ಕೃತಿಯಲ್ಲಿ ಭೌತಿಕ ಸಂಸ್ಕøತಿಯ ಪ್ರತೀಕಗಳೆನಿಸಿದ ಬರ್ಟರಂಡ್ ರಸೆಲ್, ಎಚ್. ಜಿ. ವೆಲ್ಸ್, ಜೂಲಿಯನ್ ಹಕ್ಸ್‍ಲಿ ಮುಂತಾದವರ ವಿಚಾರಗಳನ್ನು ವಿಮರ್ಶಿಸಿದ ಈತ 1930ರಲ್ಲಿ ಬಡತನದಿಂದ ಧರ್ಮಕ್ಕೊಲಿದ ಜನರ ಬಗ್ಗೆ ಟೀಕೆ ಮಾಡುವ ಕ್ಯಾಲಿಬನ್ ಇನ್ ಗ್ರಬ್ ಸ್ಟ್ರೀಟ್ (ಗ್ರಬ್ ರಸ್ತೆಯಲ್ಲಿ ಕ್ಯಾಲಿಬನ್) ಎಂಬ ವಿವಾದಾತ್ಮಕ ಗ್ರಂಥ ಪ್ರಕಟಿಸಿ ಚರ್ಚಿನಲ್ಲಿಯೂ ಟೀಕೆಗೊಳಗಾದ. ಈತನ ಎಸ್ಸೇಸ್ ಇನ್ ಸಟೈರ್ 1928ರಲ್ಲೂ ಲೆಟ್ ಡಾನ್ಸ್ ಡಿಲೈಟ್ 1939ರಲ್ಲೂ ಪ್ರಕಟವಾದ ಸಾಹಿತ್ಯ ವಿಮರ್ಶೆಯ ಕೃತಿಗಳು. ಪತ್ತೇದಾರಿ ಕಥೆಗಳ ಸರಸ ಅಧ್ಯಯನವನ್ನು ಕೀಟಲೆ ಮಾಡಲೆಂದೇ ಬರೆದ ಪ್ರಬಂಧಗಳು ಸ್ಟಡೀಸ್ ಇನ್ ಷರ್ಲಾಕ್ ಹೋಮ್ಸ್ ಎಂಬ ಪುಸ್ತಕದಲ್ಲಿವೆ. ಈತ ಬರೆದ ಪತ್ತೇದಾರಿ ಕಾದಂಬರಿಗಳಲ್ಲಿ ಮುಖ್ಯವಾದವು - ದಿ ವಯಡಕ್ಟ್ ಮರ್ಡರ್ (1925), ದಿ ಫುಟ್‍ಸ್ಟೆಪ್ಸ್ ಅಟ್ ದಿ ಲಾಕ್ (1928), ದಿ ಬಾಡಿ ಇನ್ ದಿ ಸಿಲೊ (1933). ಇವುಗಳಲ್ಲಿ ಅಸಾಧಾರಣ ಚಾಣಕ್ಯತನವಿದೆ.

	ತೀರಿಕೊಳ್ಳುವ ಮೊದಲು ಈತ ತನ್ನ ಅತ್ಯಂತ ಪ್ರಮುಖ ಕೃತಿ ಸೇಂಟ್ ತೆರೆಸಳ ಆತ್ಮಕತೆಯನ್ನು ಅನುವಾದಿಸಿ ಸೇಂಟ್ ತೆರೆಸ ಆಫ್ ಲೀನೋ ಎಂಬ ಹೆಸರಿನಿಂದ ಪ್ರಕಟಿಸಿದ.			
			(ಎಸ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ